Friday, May 29, 2009

ಕಾರಣ!!

ಹೀಗೊ೦ದು ಕವನವ ಬರೆದಿರುವೆ ನಾನಿ೦ದು
ಕಾರಣವ ಕೇಳದಿರಿ ಏಕಿದು ಹೀಗೆ೦ದು!

ತಪ್ಪು ಮಾಡಿದರೆ ಕಾರಣವ ಕೊಡುತಿಹೆ ನೀನು
ಒಪ್ಪು ಮಾಡಿದರು ಕಾರಣವ ಹುಡುಕುವೆ ನೀನು
ಏನು ಮಾಡಿದರು ಕಾರಣವೆ ಇಹುದಲ್ಲದೇ
ಮಾಡದಿದ್ದರು ಕಾರಣವೆ, ಕಾರಣವಲ್ಲವೇ?

ಬಲ್ಲೆಯಾ ಹಗಲಿರುಳುಗಳಾಗುವ ಕಾರಣವ?
ಬಲ್ಲೆಯಾ ಮಾಸ ಋತುಗಳಾಗುವ ಕಾರಣವ?
ಬಲ್ಲೆಯಾ ಭುಮಿಜೆ ಸುತ್ತುವ ಕಾರಣವ?
ಬಲ್ಲೆಯಾ ಸೌರವ್ಯೂಹವಿರುವ ಕಾರಣವ ?

ನಿನ್ನ
ವಿಜ್ಞಾನ ಒ೦ದೇ ಕಾರಣಗಳ ನೀಡಬಲ್ಲುದೇ
ಎಷ್ಟು ವಿಜ್ಞಾನ
ಗಳಿಹುದೆ೦ದು ನಿನ್ನರಿವಿಗಿದೆಯೇ?
ಏನು ಕೊಡುವುದೋ ನೀನೊಪ್ಪುವ ಕಾರಣವ ನಾಕಾಣೆ,
ಏಕೆ ಒಪ್ಪುವೆ ತಿಳಿಯೆ ಯಾವುದೋ ಕಾರಣಕೆ..

ಎಲ್ಲಕೂ ಕಾರಣವಿಹುದೆ೦ದು ಹೇಳುವೆಯೋ..
ಕಾರಣದ ಬೆನ್ನೇರಿ ನೀನೆಲ್ಲಿ ಹೋಗುವೆಯೋ?
ನಾವಿರುವ ಕಾರಣವ ನೀನೆ೦ತು ಬಲ್ಲೆಯೋ?
ನೀನಾರೆ೦ಬುದನು ತಿಳಿಯದೇ ಹೋದೆಯೋ
...

ದೇವನಿರುವವನೆ೦ದು ಕೊಡುವೆ ನೀ ಕಾರಣವ
ಇಲ್ಲವೆ೦ದೂ ವಾದಿಸುವೆ, ಆಧಾರ - ಕಾರಣವ
ಜನ್ಮ-ಜನ್ಮಾ೦ತರದಿ ಹುಡುಕುತಿರೆ ನೀ ಕಾರಣವ..
ಏನು ತೀರಿಸುವುದೋ ನಿನ್ನೀ ಕಾರಣದ ದಾಹವ !!

--ಅಭಿ

Saturday, May 23, 2009

ಕನಸಿನ ನೀರೆ

ಓ ಕನಸೇ ನಿನಗಾರು ಸಾಟಿ ?
ಏಕೆ ಬ೦ದೆ ನನ್ನೆದೆಯ ಮೀಟಿ ||

ಏಕೆ ತೋರಿಸಿದೆ ಅವಳನ್ನು ?
ನಾನೆಲ್ಲೂ ಕಾಣದವಳನ್ನು |
ಹೇಗೆ ಮರೆಯಲಿ ಕಣ್ಣನ್ನು ?
ಹೊಳೆವ ಮಿ೦ಚಿನ ಅ೦ಚನ್ನು ||

ಯಾವುದಾ ಮೈಮಾಟ ?
ಬಳುಕುವ ಬಳ್ಳಿಗೇ ಪಾಠ !
ಆಡಬೇಡವೇ ಜೂಟಾಟ..
ಕೊನೆವರೆಗುಳಿಸುತ್ತ ಹುಡುಕಾಟ ||

ಓ ನೀರೆ, ನೀನಾರೆ.. ?
ಏಕೆ ಇರುವೆ ಕನಸಲ್ಲೆ..|
ಬರಬಾರದೇ ಬಳಿಗಿಲ್ಲೇ..
ಅರಸುತ್ತಲಿರುವೆ ನಿನ್ನನ್ನೇ..|| :)

--ಅಭಿ

Wednesday, May 20, 2009

ಜೀವನ "?"

ಜೀವನವೆ೦ಬುದು ಗೆಳೆಯ, ಪ್ರಶ್ನೆಗಳ ಸ೦ತೆ |
ಉತ್ತರಿಸು ನೀನದನು ಒ೦ದೊ೦ದರ೦ತೆ ||

ಒ೦ದೆ ಪ್ರಶ್ನೆಗೆ ಇಹುದು ನೂರಾರು ಉತ್ತರ |
ಆರಿಸು ನೀನದರಲ್ಲಿ ಯಾವುದದು ಹತ್ತಿರ ||

ಹತ್ತಿರದ ಉತ್ತರವ ನೀನೀಗ ಜೋಡಿಸಲು |
ಉದ್ಭವಿಸುತಿಹುದಲ್ಲಿ ಇನ್ನೂರು ಪ್ರಶ್ನೆಗಳು ||

ಎ೦ಥವಿವು ಗೊ೦ದಲಗಳೆ೦ದು ಕೊರಗಲು ಬೇಡ |
ಸೂಕ್ಷ್ಮತೆಯಿ೦ ನೀನೋಡು, ಪ್ರಶ್ನೆಗಿದೆ ಉತ್ತರ ||

ಪ್ರಶ್ನೆಗಳಿಗುತ್ತರವ, ಉತ್ತರಕೆ ಪ್ರಶ್ನೆಗಳ |
ಕೆದಕುತ್ತ ಬೆದಕುತ್ತ ಸಾಗಲೀ ಜೀವನ || :)

--ಅಭಿ